Monday 15 February 2016

ಹೀಗೊಂದು ಪಯಣ ..

ಜೋರಾಗಿ ಸದ್ದು ಮಾಡುತ್ತಿದ್ದ ಅಲಾರಾಮಿನ ರಿಂಗಣಕ್ಕೆ ಗಾಢವಾದ ನನ್ನ ನಿದ್ದೆಗೆ ಭಂಗವಾಗಿತ್ತು. ಗಡಿಯಾರದ ಮುಳ್ಳು 4 ಘಂಟೆ ತೋರಿಸುತಿತ್ತು. ಮಗ್ಗಲು ಹೊರಳಿಸುತ್ತಾ, ಕಣ್ಣುಜ್ಜುತ್ತಲೇ ನಿಧಾನವಾಗಿ ಎದ್ದೆ. ಕಣ್ಣಂಚಲ್ಲಿ ನಿದ್ರೆ ಕಾಣತ್ತಿದ್ದರೂ ಮನದೊಳಗಿನ ಉತ್ಸಾಹ ನನ್ನನ್ನು ಹಾಸಿಗೆಯಿಂದ ಏಳುವಂತೆ ಮಾಡಿತ್ತು. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗುವುದೆಂದು ಮೊದಲೇ ನಿಶ್ಚಯವಾಗಿತ್ತು.  ತರಾತುರಿಯಿಂದ ತಯಾರಾಗಿ ನನ್ನ ನಾಲ್ವರು ಗೆಳತಿಯರೊಡನೆ ,ಮೊದಲೇ ಗೊತ್ತು ಮಾಡಿದ್ದ ಕಾರಿಗಾಗಿ ಕಾಯುತ್ತಾ ನಿಂತೆ.ಸರಿ ಸುಮಾರು ೫ ಗಂಟೆಗೆ ನಮ್ಮ ಕಾರು ಬಂದು ಮನೆಯ ಬಾಗಿಲ
 ಬಳಿ ನಿಂತಿತು . ಹಾಡು ,ಮಾತುಕತೆಗಳ  ನಡುವೆ ಚುರುಗುಟ್ಟುತ್ತಿದ್ದ ಹೊಟ್ಟೆಗೆ ಸ್ವಲ್ಪ ತಿಂಡಿಯೂ ಆಯಿತು .ಬೆಂಗಳೂರಿನಿಂದ ಹೊರಟ  ನಮ್ಮ ಗಾಡಿಯು  ಮೈಸೂರನ್ನು ಸಾಗಿ ಗೋಪಾಲಸ್ವಾಮಿ ಬೆಟ್ಟದ ಮಡಿಲನ್ನು ತಲುಪಿತು. 

ಬೆಟ್ಟದ ತಪಲಿನಲ್ಲೇ ನಾವು ಕೊಂಡೊಯ್ದಿದ್ದ ಕಾರನ್ನು ನಿಲ್ಲಿಸುವಂತೆ ಅಲ್ಲಿನ ಜನ ಸೂಚಿಸಿದರು. ಅಲ್ಲಿಯೇ ಸರ್ಕಾರಿ ಬಸ್ಸುಗಳು ನಮಗಾಗಿ ಕಾಯುತ್ತ ನಿಂತಿದ್ದವು. ಹೋಗಿ ಹತ್ತಿ ಕುಳಿತೆವು. ಬೆಟ್ಟದ ತುದಿಗೆ ಸ್ವಂತ ವಾಹನ ಬಿಡುವುದಿಲ್ಲವೆಂದೂ, ಸರ್ಕಾರೀ ಬಸ್ಸುಗಳನ್ನೇ ಬಳಸಬೇಕೆಂದು ಅಲ್ಲಿನ ಜನರಿಂದ ತಿಳಿದು ಬಂತು. ಗೋಪಾಲ ಸ್ವಾಮಿ ಬೆಟ್ಟಕ್ಕೆ ಜನ ದಟ್ಟಣಿ ನೋಡಿಕೊಂಡು  ಪ್ರತಿ ಅರ್ಧ ಘಂಟೆಗೊಂದು ಬಸ್ಸು ಬಿಡುತ್ತಾರಂತೆ. ಬಸ್ಸಿನಲ್ಲಿ ಜನ ಸಂಧಣಿ ಹೆಚ್ಚುತ್ತಿದ್ದಂತೆ ಚಾಲಕ ಬಸ್ಸು ಚಲಿಸಲು ಆರಂಭಿಸಿದ. ಹೊರಡುವ ಮೊದಲೇ ಈ ಸ್ಥಳದ ಬಗ್ಗೆ ಓದಿದ್ದೆ. ಬಂಡೀಪುರ ಅಭಯಾರಣ್ಯದ ಹೃದಯ ಭಾಗದಲ್ಲಿರುವ ಈ ಬೆಟ್ಟ ೧೪೫೪ ಮೀ  ಎತ್ತರದಲ್ಲಿದೆ. ಇದು ಬಂಡೀಪುರ ಅರಣ್ಯದ ಅತಿ ಎತ್ತರದ ಪ್ರದೇಶವೂ ಹೌದು. ಇದನೆಲ್ಲಾ ನಾನು ಯೋಚಿಸಿ ತಾಳೆ ಹಾಕುತ್ತಿದ್ದಗಲೇ ಶ್ರುತಿ ನನ್ನನ್ನು ತಟ್ಟಿ ಕಿಟಕಿಯಿಂದಾಚೆ  ನೋಡುವಂತೆ ಸೂಚನೆ ಕೊಟ್ಟಳು.ಹೊರನೋಡಿದಾಗ ಕಂಡದ್ದು ಪ್ರಕೃತಿಯ ವಿಹಂಗಮ ನೋಟ.  ನಮ್ಮ ಬಸ್ಸು ನಿಧಾನವಾಗಿ ಘಾಟಿಯನ್ನು ಸಾಗುತ್ತಿತ್ತು .ಬಳುಕುತ್ತಾ ಸಾಗುವ ರಸ್ತೆಯ ಅಂಚಿನಲ್ಲೇ ಸಾಲು ಸಾಲು ಮರಗಳು.  ಸುತ್ತಲೂ ಹಸಿರು, ತಂಪಾದ ಗಾಳಿ. ಬೆಂಗಳೂರಿನ ಹೊಗೆ ಕುಡಿದು ಬದುಕುತ್ತಿದ್ದ ನಮಗೆ ನಿರ್ಮಲವಾದ ಗಾಳಿಯು ಉಲ್ಲಾಸ ನೀಡಿತ್ತು. ಬಂಡೀಪುರ ಅಭಯಾರಣ್ಯದ ಆನೆಗಳು ಇಲ್ಲಿ ಸುಳಿದಾಡುತ್ತವೆ ಎಂದು ಕೇಳಿದ್ದೆ, ಕಾಣುತ್ತವೆಯೇನೋ ಎಂಬ ಆಸೆಯಿಂದ ಕತ್ತು ಇಣುಕಿಸಿ ನೋಡಿದೆ. ನಿರಾಶೆಯಿಂದ ಬಸ್ಸಿನಲ್ಲಿದ್ದ ಜನರತ್ತ ದೃಷ್ಟಿ ಹಾಯಿಸಿದೆ.ಎಲ್ಲರ ಕಣ್ಣಲ್ಲೂ ಉತ್ಸಾಹ, ಭಕ್ತಿ  ಬೇಡಿಕೆಗಳು ಕಂಡವು. ಅಷ್ಟರಲ್ಲಿ ದೇವಸ್ಥಾನದ ಗೋಪುರದ ತುದಿ ಕಾಣ ತೊಡಗಿತು . ಹತ್ತಿರ ಬಂದೆವೇನೋ ಎಂದು ಇಳಿಯಲು ಸಿದ್ಧವಾದೆವು. 

ಬಸ್ಸು ಇಳಿಯುತ್ತಿದ್ದಂತೆ ನಮಗೆ ಕಂಡದ್ದು ಸುಂದರವಾದ ಸುವರ್ಣ ರಂಗಿನ ಗೋಪಾಲಸ್ವಾಮಿ ದೇವಾಲಯ. ಸದಾ ಮಂಜು ಮಿಶ್ರಿತವಾಗಿರುವುದಕ್ಕೋ ಏನೋ ಇದನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟ ಅನ್ನುತಾರೆ.ಚಾಮರಾಜನಗರ ಜಿಲ್ಲೆಯಲ್ಲಿರುವ ಈ ದೇವಾಲಯವು ಸರಿ ಸುಮಾರು ೧೩೧೫ರಲ್ಲಿ ಹೊಯ್ಸಳರ ಎರಡನೇ ಬಲ್ಲಾಳನಿಂದ ಸ್ಥಾಪಿತವಯಿತಂತೆ. ನಂತರ ವೇಣುಗೋಪಾಲನ ಭಕ್ತರಾಗಿದ್ದ ಮೈಸೂರಿನ ಒಡೆಯರು ಇದನ್ನು ವ್ಯವಸ್ಥಿತವಾಗಿ ರೂಪಿಸಿ ನೋಡಿಕೊಂಡು ಹೊದರಂತೆ.ದೇವಾಲಯದ ಗರ್ಭಗೃಹದಲ್ಲಿ ಶ್ರೀಕೃಷ್ಣನ ಮೂರ್ತಿಯಿದೆ.  ಪಿಳ್ಳಂಗೋವಿಯ ಚೆಲುವ ಕೃಷ್ಣನಿಗೆ ಅಂದು ಬೆಣ್ಣೆಯ ಅಲಂಕಾರ. ದೇವಾಲಯದ ಸುತ್ತಲೂ ಬಹಳಷ್ಟು ಕೊಳ್ಳಗಳಿವೆ. ಅಲ್ಲಿನ ಅರ್ಚಕರು ಹೇಳಿದ ಕತೆಯ ಪ್ರಕಾರ ದೇವಸ್ಥಾನದ ಸುತ್ತಲೂ ೭೭ ಕೊಳ್ಳಗಳಿವೆ. ಅಲ್ಲಿ ಕಾಗೆಯೊಂದು ಕೊಳ್ಳದಲ್ಲಿ ಮಿಂದು ಹಂಸವಾಯಿತಂತೆ  ಅದಕ್ಕೇ  ಹಂಸತೀರ್ಥವೆಂದು ಈ ಕೊಳ್ಳಗಳನ್ನು ಕರೆಯುತ್ತಾರೆ. ನನಗನ್ನಿಸಿದ ಹಾಗೆ ಹಿಂದೊಂದು ಕಾಲದಲ್ಲಿ ಈ ಕೊಳಗಳಲ್ಲಿ ಬಹಳಷ್ಟು ಹಂಸಗಳಿದ್ದಿರಬಹುದು.ಅದರಿಂದಲೇ ಹಂಸತೀರ್ಥ ಎಂಬ ಹೆಸರು ಬಂದಿರಬಹುದು.ದೇವಸ್ಥಾನದ ಸುತ್ತಲೂ ಹಸಿರಿನ ಸೆರಗು ಹಾಸಿದೆ. ಮಧುಮಲೈ ಮತ್ತು ನೀಲಗಿರಿ ಶ್ರೇಣಿಗಳು ಬೆಟ್ಟದ ಸುತ್ತಲೂ ಹರಡಿದ್ದು ನೋಡುಗರ ಕಣ್ಮನ ಸೆಳೆಯುತ್ತದೆ.ಕಣ್ಣು ಹಾಯಿಸಿದಷ್ಟೂ ಹಸಿರು ,ಮನದೊಳಗೆ ಏನೋ ನೆಮ್ಮದಿ. ಆ ಬೆಟ್ಟ ಶ್ರೇಣಿಗಳ ನಡುವೆ ನಾನೂ ಒಬ್ಬ ಸ್ವಚ್ಚಂದದಿ ಹಾರುವ  ಹಕ್ಕಿಯಾಗಿ ಕಳೆದು ಹೋಗಿದ್ದೆ. ಅಷ್ಟರಲ್ಲಿ "ಸೆಲ್ಫಿ ತೆಗೆಯೋಣ ಬಾ " ಎಂದು ದೀಪಾ ಕರೆದಾಗಲೇ ನಾನು ವಾಸ್ತವಕ್ಕೆ ಬಂದಿದ್ದು . ಸೆಲ್ಫೀಗೊಂದು ಪೋಸು ನೀಡಿ  ದೇವಸ್ಥಾನವನ್ನು  ಇನ್ನೊಮ್ಮೆ  ಸುತ್ತಿ ಬಂದು ಮತ್ತೆ ಫೋಟೋ  ಕ್ಲಿಕ್ಕಿಸತೊಡಗಿದೆವು.ಅಷ್ಟರಲ್ಲಿ ಎರಡನೆಯ ಬಸ್ಸೂ ಸಹ ಹೊರಡುವ ಸಮಯವಾಗಿತ್ತು. ನಾವು  ಬಂದ ಬಸ್ಸು ಕೇವಲ ಅರ್ಧ ಗಂಟೆ ಮಾತ್ರ ಅಲ್ಲಿ ನಿಲ್ಲುವುದು. ಅದೇ ಬಸ್ಸಿನಲ್ಲಿ ಹಿಂದಿರುಗ ಬೇಕು ಎಂಬ ಕಡ್ದಾಯವೇನೂ ಇಲ್ಲ. ಹಾಗಾಗಿಯೇ ನಾವು ನಿಸರ್ಗದ ಸವಿಯನ್ನು ಇನ್ನಷ್ಟು ಸವಿದು ಎರಡನೇ ಬಸ್ಸಿಗೆ ಹಿಂದಿರುಗಿದೆವು. ಬೆಟ್ಟದ ತಪ್ಪಲನ್ನು ತಲುಪುವಾಗ ಘಂಟೆ ಮಧ್ಯಾಹ್ನ ೧ ಆಗಿತ್ತು.ನಮ್ಮ ಕಾರು ನಮಗಾಗಿ ಕಾಯುತ್ತ ನಿಂತಿತ್ತು.

 ಹೇಳುವುದನ್ನು ಮರೆತೆ ,ಈ  ಸ್ಥಳದ ಇನ್ನೊಂದು ಅಚ್ಚರಿ ಎಂದರೆ ಇಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧ. ಹಾಗಗಿಯೋ  ಏನೋ ದೇವಾಲಯದ ಆಸುಪಾಸಿನ ಸ್ಥಳವೂ ಸ್ವಚ್ಚವಾಗಿತ್ತು. ಸ್ವಂತ ವಾಹನದ ಓಡಾಟ ನಿಷೇಧ ,ಪ್ಲಾಸ್ಟಿಕ್ ಬಳಕೆ ನಿಷೇಧ, ಇವುಗಳಿಂದಾಗಿಯೇ  ಈ ಸ್ಥಳ ಶಾಂತಿಯುತವಾಗಿ ಆಧುನಿಕತೆಯಿಂದ ದೂರವಾಗಿ ಮನಸ್ಸಿಗೆ ಹತ್ತಿರವಿತ್ತು. ನಿಧಾನವಾಗಿ ಒಬ್ಬೊಬ್ಬರಾಗಿಯೇ  ಕಾರನ್ನು ಏರಿ ಕುಳಿತೆವು. ಗೋಪಾಲಸ್ವಾಮಿ ಬೆಟ್ಟಕ್ಕೊಂದು ಶುಭವಿದಾಯ ಹೇಳಿ ನಮ್ಮ ಕಾರು ಬೆಂಗಳೂರಿನತ್ತ ಮುಖ ಮಾಡಿತು.

Friday 5 February 2016

ಹಾಸ್ಟೆಲ್ ಜೀವನ  ಮರೆಯದ ಪಯಣ
ಮರಳಿ ಬಾರದೆ ......?!
ನುಡಿದ ಮಾತು ಆಡಿದ ಆಟ
ಮತ್ತೆ  ಸಿಗದೇ ...?!  । ಪ ।

ಹಾಸ್ಟೆಲ್ ಊಟ ,ವಾರ್ಡನ್  ಕೂಗಾಟ
ಮರಳಿ ಬಾರದು ..
ಗೋಡೆಯ ಕುಟ್ಟುವ  ಡಬಡಬ  ಸದ್ದು
ಎಂದೂ ಕೇಳದು ...!

ದೀಪನ ನಗುವು ,ಮ್ಯಾಗ್ಗಿ ಯ ಮಾತು
ಪ್ರತಿಧ್ವನಿಸುತಿದೆ .....
ದೀಪಾ ಭಟ್ಟನ ಓವರ್ ಆಕ್ಟಿಂಗ್
ಕಣ್ಣಿಗೆ  ಕಟ್ಟುತಿದೆ ....!!

ಶ್ರುತಿಯ ಮುಗುಳ್ನಗು  ಅಂಕಿಯ  ನುಡಿಗಳು
ಮನದಲಿ  ಮೊಳಗುತಿದೆ..
ಹಾಸ್ಟೆಲ್ ನೆನಪು ಮನದಾಳದಲಿ
ಬೆಚ್ಚನೆ ಕುಳಿತಿದೆ .....!!





Tuesday 24 July 2012

ಧ್ಯೇಯ

ತನುವಿನ ಈ  ದೋಣಿಯ ಹತ್ತಿ ಹೊರಟಿದೆ  ಮನವು
ಬಾಳ ಸಾಗರದಿ ತೇಲುತ  ಗುರಿಯೆಂಬ ತಟಕೆ
ಆಸೆಗಳ ಹುಟ್ಟು ಹಿಡಿದು ಅಂಬಿಗನೆ  ನಾನಾಗಿ
ಹೊರಟಿಹೆ ಭವಿಷ್ಯವನರಸಿ ಜಲಧಿಯ ಸಾಗಿ |
ವಿಶಾಲ ಸಾಗರದಿ ಸೆಳೆತಗಳು ನೂರು
ಸಾಗಬೇಕಿದೆ ಗುರಿಯೆಡೆಗೆ ..
ಹೆದ್ದೆರೆಗಳ ಜಯಿಸಿ, ಅಂಬುಧಿಯನೆ ಒಲಿಸಿ |

ಗುರಿಯೋ .... ಮರೀಚಿಕೇಯೋ ...??

ಮುಪ್ಪಿನೆಡೆಗೆ  ಜರಿಯುತಿದೆ  ತನುವು
ಕನಸ ಕೈ ಬಿಡಲೊಲ್ಲದೀ   ಮನವು
ಕಣ್ಣಿಗೆ ಕಾಣ್ವುದು ,ಕೈಗೆ ಎಟುಕದು
ಬಳಿ ಹೋದಷ್ಟೂ ದೂರ ಸರಿವುದು |

ಅದೆಲ್ಲಿಯೇ ಇದ್ದರೂ ಎಲ್ಲಿ ಮಾಯವಾದರೂ
ನಾ ಹಿಂದೆ ಸರಿಯೆನು ,ಧ್ಯೇಯವನು  ಸೇರುವೆನು
ನನ್ನ ಬಾಳ ಗುರಿಯನು ತಲುಪಿಯೇ ತೀರುವೆನು.

Saturday 7 April 2012

ಅನಾಥ ಬದುಕು

   

ಹುಟ್ಟುತಲೇ  ನಾ ಕಾಣೆ  ಹೆತ್ತವ್ವನ ಮೊಗವ
ಕಂಡರಿಯೆ ಎನ್ನ ಸಲಹುವ ಕುಟುಂಬವ
ಹಾದಿಯೇ ಮನೆಯಾಯ್ತು, ಗಗನವೇ ಸೂರಾಯ್ತು
ಈ ಅನಾಥ ಬಾಳಿಗೆ ಅಪರಿಚಿತರೇ ಬಂಧುವಾಯ್ತು|

ಕಣ್ಣೀರ  ಕುಡಿದೆ, ಬಿಸಿಲಲ್ಲಿ ಬೆಂದೆ
ಉದರ ನಿಮಿತ್ತ ಹಗಲಿರುಳು ದುಡಿದೆ
ಬಳಲಿ ಬಾಯಾರಿದೆ ,ಬದುಕಲಿ ನೊಂದೆ
ಒರಗಲು ಹೆಗಲಿಲ್ಲದೆ ಚಡಪಡಿಸಿದೆ |                                      
                                             
 ಆಡುವ ಕೈಗಳು ಕಲ್ಲನು ಕೆತ್ತಿದವು
 ಓಡುವ ಕಾಲ್ಗಳು ಮರುಗಟ್ಟಿ ಹೋದವು
ಕಣ್ಣೀರ ಹನಿಗಳು ಮೊಗವನು ತೊಯ್ದವು
ನಾ ಕಂಡ ಕನಸುಗಳು ನುಚ್ಚು ನೂರಾದವು|

ನನ್ನ ಕಿವಿಗಳು ಎಂದೂ ಕೇಳಲಿಲ್ಲ ಅವ್ವನ ಜೋಗುಳ
ಪ್ರತಿದಿನದ ಹಾಡಾಯ್ತು ಮಾಲಿಕನ ಬೈಗುಳ
ನನ್ನ ಬಾಲ್ಯದ ಕ್ಷಣವು ಮಣ್ಣಲ್ಲಿ ಮಣ್ಣಾಯ್ತು
ಕಂಡ ಕನಸಿನ ಮನೆಯು ಕ್ಷಣದಲಿ ಕುಸಿದೋಯ್ತು

ವಿದ್ಯೆ ಕೊಡುವವರಿಲ್ಲ , ಪ್ರೀತಿ ತೋರ್ವರೆ ಇಲ್ಲ
ನನ್ನ  ಈ  ಮೊಗವ   ತಿರಸ್ಕರಿಸುವವರೇ ಎಲ್ಲ
ಕತ್ತಲ ಖಂಡವಿದು ಬಾಳನೇ ನುಂಗಿದೆ ,
ಭರವಸೆಯ ಬೆಳಕಿಗೆ ಮನವು ಹಂಬಲಿಸಿದೆ

ಹುಟ್ಟಿಸಿದ ದೇವನು  ಹುಲ್ಲು ಮೇಯಿಸದಿಹನೆ?
ನನಗೊಂದು ಬದುಕಿದೆ ,ಕನಸು ಕಾಣುವ ಹಕ್ಕಿದೆ
ಕಷ್ಟಗಳ ಕಾಲುವೆಗೆ ಸೇತುವೆಯ ಕಟ್ಟುವೆನು
ನನ್ನ ಬದುಕಿನ ಎಲ್ಲೆಯ ಛಲದಿಂದ ತಲುಪುವೆನು|














 
                                                 

Sunday 18 March 2012

ಬಯಕೆ..

ಹಕ್ಕಿಯ ತೆರದಿ ಆಗಸ ಚುಂಬಿ
   ಹಾರಾಡುವ ಬಯಕೆ 
ಮೀನಿನ ಬೆಡಗಲಿ ನೀರಲಿ ಜಿಗಿದು 
  ಈಜಾಡುವ ಬಯಕೆ 

  ಕತ್ತಲ ಬಾನಿನ ಚಪ್ಪರದಡಿಯಲಿ
  ಬಾಳ ಚಂದ್ರಮನ ಕಾಣುವ ಬಯಕೆ
 ಚಿಟಪಟ ಗುಡುವ ಮಳೆಹನಿಯಲ್ಲಿ
   ಕುಣಿದಾಡುವ ಬಯಕೆ

ಜೀವದ ಗೆಳೆಯರ ಜೊತೆಯಲಿ ಸೇರಿ 
    ಜಿಗಿದಾಡುವ ಬಯಕೆ
ತಿಂಗಳ ರಾತ್ರಿಯ ತಂಗಾಳಿಯಲಿ 
   ತೇಲಾಡುವ ಬಯಕೆ 

ಅಮ್ಮನ ಮಡಿಲಲಿ ಅರಗಿಣಿಯಂತೆ
   ಬೆಚ್ಚನೆ ಮಲಗುವ ಬಯಕೆ 
ಕ್ಷಣ ಕ್ಷಣವೂ ಈ ಬದುಕಿನ ಸವಿಯನು
  ಅನುಭವಿಸುವ ಬಯಕೆ
ಬಯಕೆಯ ಮೂಟೆಯ ಹೊತ್ತು ಸಾಗುತಿಹ 
 ಈ ಬಾಳಿನ ಬಂಡಿಯ 
ಚಾಲಕಿಯಾಗಿ ನಗುತ  ನಗುತ 
 ಗುರಿ ಮುಟ್ಟಿಸುವ ಬಯಕೆ 


   

Monday 12 March 2012

ಓ ಗುರಿಯೇ ..

 ದೂರದಿಂದಲೇ ನೀ ಬಾ ಎಂದು ಕರೆಯುತಿಹೆ,
ಬಳಿ ಓಡಿ ಬಂದರೆ ನೀ ದೂರ ಓಡುತಿಹೆ,
ನೀನಾದೆ ನನ್ನ ಬಾಳ ಮರೀಚಿಕೆ,
ನೀ ನನ್ನ ಬಂದು ಸೇರಲಾರೆ ಏಕೆ..?
         
              ನಿನ್ನನ್ನು ಸೇರಲು ಮನವು ಹವಣಿಸುತಿದೆ ,
               ಈ ಎನ್ನ ಹೃದಯ ನಿನ್ನ ಸಾಂಗತ್ಯ ಬಯಸಿದೆ,
               ನೀನಾದೆ ನನ್ನ ಬಾಳ ಮರೀಚಿಕೆ,
               ನೀ ನನ್ನ ಬಂದು ಸೇರಲಾರೆ ಏಕೆ ..?


ಬೆವರ ಹರಿಸಿದೆ, ದೇಹ ದಣಿಸಿದೆ
ನಿನ್ನ ಮಿಲನದೋಸುಗ ನನ್ನ ಬಾಳನೆ ಅರ್ಪಿಸಿದೆ.,
ಆದರೂ ನೀನಾದೆ ನನ್ನ ಬಾಳ ಮರೀಚಿಕೆ ,
ನೀ ನನ್ನ   ಬಂದು ಸೇರಲಾರೆ ಏಕೆ.?
 
              ನೀ ನನ್ನ್ನ ಕನಸಾದೆ, ಕನಸಿಂದ ದಿನವಾದೆ
               ಇಂದು ನೀನೇ ನನ್ನ ಉಸಿರಾಗಿರುವೆ
               ನಿನ್ನೊಡನೆ ಬೆರೆಯಲು ನಾನು ಹಂಬಲಿಸಿಹೆ
               ಬಂದು ನಿನ್ನ ಸೇರಲು  ದೌಡಾಯಿಸುತಿಹೆ

 ನೀ ಮರೀಚಿಕೆಯಲ್ಲ , ನಾ ಕಂಡ ಕನಸು
ನನ್ನೊಡನೆ ಹುಟ್ಟಿ ಬೆಳೆಯುತಿಹ ನನ್ನ ಗುರಿಯು
 ಛಲ ತೊಟ್ಟು ಬರುತಿಹೆನು ,ಬಂದು ನಿನ್ನ ಅಪ್ಪುವೆನು
ಓ ಗುರಿಯೇ ,ನಾನು ನೀನು ಬೆರೆತರೆ ನನ್ನ ಬದುಕು ಸಮಾಗಮವು
ನನ್ನ ನಿನ್ನ ಮಿಲನದಿ ನನ್ನ ಜನ್ಮ ಸಾರ್ಥಕವು.




Thursday 8 March 2012

ಅಮ್ಮಾ

ಧರಿತ್ರಿಯಂತೆ ಸಹಿಷ್ಣಳು,ಗಂಗೆಯಂತೆ ಪುನೀತಳು
ನನ್ನ ಬಾಳಿನ ಕರ್ತ್ರುವು ,ಈ ಬದುಕಿನ ಸರ್ವತ್ರವು 
ಓ ಅಮ್ಮಾ ,ನನ್ನ ಬಾಳಿನ ದೇವತೆ ನೀನು 
ಏಳೇಳು ಜನ್ಮಕು ನಿನ್ನ ಮಗಳಾಗಿ ಹುಟ್ಟುವೆ ನಾನು!

                   ನನ್ನ ಮನವು ನೊಂದಾಗ ಕಣ್ಣೇರು ಹರಿಯಿತು ನಿನ್ನ ಕಣ್ಣಿಂದ
                   ನಾ ನಕ್ಕು ನಲಿವಾಗ ನಗು ಹೊರಟಿತು ನಿನ್ನ ತುಟಿಯಿಂದ                   
                    ಓ ಜನ್ಮದಾತೆಯೇ , ನಡೆದಾಡುವ ದೇವತೆ ನೀನು
                    ಏಳೇಳು ಜನ್ಮಕು ನಿನ್ನ ಮಗಳಾಗಿ ಹುಟ್ಟುವೆ ನಾನು !

ಹೊಟ್ಟೆಯಲಿ ಹೊತ್ತು ಸಲಹಿದೆ,ನನ್ನನು ನಿನ್ನ ನೋವುಗಳನು 
ತಾಳ್ಮೆಯಿಂದ ಸಹಿಸಿದೆ ಬಾಳಲಿ ಬಂದ ಕಷ್ಟಗಳನು
ನನ್ನ ಸುಖದೋಸುಗ ತ್ಯಜಿಸಿದೆ ನಿನ್ನ ಸುಖಗಳನು
ಸಂಸಾರ ಬಂಡಿಯ ಸಾಗಿಸಲು  ಮುಡಿಪಿಟ್ಟೆ ನಿನ್ನ ಬದುಕನು!
   
                   ಮೀಯಿಸಿದೆ ಪ್ರೀತಿಯ ಜಲದಲ್ಲಿ,ಉಣಿಸಿದೆ ವಾತ್ಸಲ್ಯದ ತುತ್ತಿನಲಿ
                   ಪೊರೆದೆ ಎನ್ನ ಕಣ್ಣ ರೆಪ್ಪೆಯಂತೆ, ನೀನಾದೆ ನನ್ನ ಬಾಳಿನ ಹಣತೆ
                   ಓ ಅಮ್ಮಾ ,ನನ್ನ ಬಾಳಿನ ದೇವತೆ ನೀನು
                   ಏಳೇಳು ಜನ್ಮಕು ನಿನ್ನ ಮಗಳಾಗಿ ಹುಟ್ಟುವೆ ನಾನು !